ಸಾಂಗತ್ಯ

ನೇಪಥ್ಯದಲ್ಲೇ ಸೊಗಸು ಕಟ್ಟಿಕೊಡುವ 'ಸುಬ್ರಹ್ಮಣ್ಯಪುರಂ'

ತಮಿಳು ಚಲನಚಿತ್ರ 'ಸುಬ್ರಹ್ಮಣ್ಯಪುರಂ' 2008 ರಲ್ಲಿ ಬಿಡುಗಡೆಗೊಂಡ ಚಿತ್ರ. ಆದರೆ ಅದರ ವಿಶೇಷವೆಂದರೆ 30 ವರ್ಷ ಹಿಂದೆ ನಡೆದ ಕಥೆ ಆಧರಿಸಿದ್ದು. ಅದೇನೂ ವಿಶೇಷವಲ್ಲ ಎಂದರೂ ಚಿತ್ರದ ಪ್ರತಿ ಫ್ರೇಮ್ 30 ವರ್ಷದ ಹಿಂದಿನ ಸ್ಥಿತಿಯನ್ನೇ ಹೋಲುತ್ತವೆ ಎನ್ನುತ್ತಾರೆ ಸೃಜನ್. ಬರಹ ಓದಿ srujancartoonist@gmail.com ಪ್ರತಿಕ್ರಿಯಿಸಿ.

30 ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ನಡೆದಿದ್ದ ಘಟನೆಯನ್ನು ಆಧರಿಸಿದ ಸಿನಿಮಾ "ಸುಬ್ರಹ್ಮಣ್ಯ ಪುರಂ’.

ತಮಾಷೆಯೆಂದರೆ ಇಲ್ಲಿ ಇಡೀ ಸಿನಿಮಾವನ್ನು 30 ವರ್ಷಗಳ ಹಿಂದಿನ ನೇಪಥ್ಯದಲ್ಲೇ ಮಾಡಿದ್ದಾರೆ. ಈಚಿನ ಸಿನಿಮಾಗಳಲ್ಲಿ 5 ಅಥವಾ 10 ನಿಮಿಷಗಳ, 20-30 ವರ್ಷಗಳ ಹಿಂದಿನ ದೃಶ್ಯಗಳನ್ನು ಕಪ್ಪು ಬಿಳುಪಿನಲ್ಲಿ ತೋರಿಸುತ್ತ ನೇಪಥ್ಯಕ್ಕೆ ಸರಿಯೋದನ್ನು ನೆನಪಿಸಿಕೊಳ್ಳಿ. ಆದರೆ ಇಡೀ ಚಿತ್ರವನ್ನೇ ಆ ನೇಪಥ್ಯದೊಂದಿಗೆ ಮಾಡಿದರೆ..ಆ ಕಾಲದ ಪರಿಸರ, ಉಡುಗೆ ತೊಡುಗೆ, ಸಂಸ್ಕೃತಿ ಇತ್ಯಾದಿಗಳನ್ನು ಯಥಾವತ್ತಾಗಿ ತೋರಿಸುವ ಮೂಲಕ. (ಇಲ್ಲಿ "ಆ ದಿನಗಳು’ ಸಿನಿಮಾ ನೆನಪಿಸಿ ಕೊಳ್ಳಿ..70-80 ರ ದಶಕದ ಬೆಂಗಳೂರಿನ ಭೂಗತ ಲೋಕದ ಹಿನ್ನೆಲೆಯ ಕತೆ..)

"ಸುಬ್ರಹ್ಮಣ್ಯಪುರಂ’ಸಾಧಾರಣ ಮಾರಾಮಾರಿ, ಗ್ರಾಮ ರಾಜಕೀಯದ ದ್ವೇಷ ದಳ್ಳುರಿಗಳ ಹಿನ್ನೆಲೆಯಲ್ಲಿ ತಮ್ಮ ಅಮೂಲ್ಯ ಬದುಕನ್ನು ಮುಗ್ಧವಾಗಿ ನಾಶಮಾಡಿಕೊಳ್ಳುವ ಸ್ನೇಹಿತರ ಕತೆ. ಚಿತ್ರದಲ್ಲಿನ ಆ ಕಾಲದ ಪ್ರೀತಿ, ಪ್ರೇಮ, ಆಕರ್ಷಣೆ, ಪರಿಸರಗಳು ಪ್ರೇಕ್ಷಕನಿಗೆ ಮುದ ಕೊಡುತ್ತವೆ. ಇಲ್ಲಿ ಪರಮ್(ಶಶಿಕುಮಾರ್) ಪಾತ್ರದ ಕಾಣಿಸದ ನಟನೇ ಸಿನಿಮಾದ ನಿರ್ಮಾಪಕ, ನಿರ್ದೇಶಕ ಮತ್ತು ಚಿತ್ರಕಥಾ ಲೇಖಕ.

ಜೈ ಮತ್ತು ಶಶಿಕುಮಾರ್ (ಅಳಗರ್ ಮತ್ತು ಪರಮ್ )ಇಬ್ಬರೂ ನಿರುದ್ಯೋಗಿಗಳು. ಜೀವದ ಗೆಳೆಯರು ಕೂಡ. ಹಾಯಾಗಿ ತಿಂದುಂಡು ಕಾಲ ಕಳೆಯುತ್ತಾ ಸುಬ್ರಹ್ಮಣ್ಯಪುರಂ ಹಳ್ಳಿಯಲ್ಲಿ ತಿರುಗಾಡಿಕೊಂಡಿರುತ್ತಾರೆ.ಊರಿನ ಪುಟ್ಟ ರಾಜಕೀಯ ಪುಢಾರಿಯೊಬ್ಬ ಇವರನ್ನು ತನ್ನ ಕಾನೂನು ಬಾಹಿರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿರುತ್ತಾನೆ. ತಮ್ಮಂಥ ಮೂರು ಜನರನ್ನು ಕಟ್ಟಿ ಕೊಂದು ಆಗಾಗ ಸಣ್ಣ ಪುಟ್ಟ ಕಳ್ಳತನ ಮಾಡುತ್ತಾ , ಪೊಲೀಸರಿಗೆ ಸಿಕ್ಕಿ ಸ್ಟೇಷನಲ್ಲಿರೋದು, ಪುಢಾರಿಯ ಶಿಫಾರಸ್ಸಿನಿಂದ ಹೊರಬರೋದು..ಅವರ ದಿನಚರಿ.
ಒಂದು ಕೊಲೆಗಾಗಿ ಪುಢಾರಿ ಈ ಗುಂಪಿನ ಮೂವರನ್ನು ಬಳಸಿಕೊಳ್ಳುತ್ತಾನೆ. ಅಳಗರ್, ಪರಮ್ ಮತ್ತು ಕಾಶಿ ಸುಪಾರಿ ಮುಗಿಸಿದ ನಂತರ ನಗುತ್ತಲೇ ಜೈಲಿಗೆ ಹೋಗುತ್ತಾರೆ. ಆದರೆ ತಿರುವು ಇಲ್ಲೇ ಇರೋದು. ಪುಢಾರಿ, ಹುಡುಗರ ಕಡೆ ತಿರುಗಿ ಸಹಿತ ನೋಡುವುದಿಲ್ಲ. ತಣ್ಣಗೆ ತನ್ನ ಪಾಡಿಗೆ ತಾನಿದ್ದು ಬಿಡುತ್ತಾನೆ. ಹುಡುಗರು ಭಯದಿಂದ ಹತಾಶರಾಗುತ್ತಾರೆ. ಏನೂ ತೋಚದು. ಆ ಊರಿನ ಮತ್ತೊಬ್ಬ ಮರಿ ಪುಢಾರಿ ಹುಡುಗರ ಕಡೆ ಆಸಕ್ತಿ ತೋರುತ್ತಾನೆ. ಅವನಿಗೆ ರಾತ್ರಿಯಲ್ಲಿ ಜೈಲಿನ ಹುಡುಗರು ತನ್ನ ಆಯುಧಗಳಾಗಿ ಗೋಚರಿಸುತ್ತಾರೆ. ಮತ್ತು ಅವನಿಗಾಗಿ ಮತ್ತೊಂದು ಭೀಕರ ಕೊಲೆಗೈಯಲು ಸಿದ್ಧರಾಗುತ್ತಾರೆ. ತಾವು ಬದುಕಲ್ಲಿ ನೆಲೆಯೂರಲು ಆರ್ಥಿಕ ಸಹಕಾರ ನೀಡುವನೆಂಬ ಒಂದೇ ಒಂದು ಕಾರಣದಿಂದ ಮುಗ್ಧರಾಗಿ ಆತ ಹೇಳಿದ್ದಕ್ಕೆಲ್ಲ ಒಪ್ಪುತ್ತಾರೆ. ಇಲ್ಲೂ ಅವನ ಮೋಸದ ಮತ್ತೊಂದು ಮುಖದ ಕರಾಳತೆ ಹುಡುಗರನ್ನು ಬೆಚ್ಚಿ ಬೀಳಿಸುತ್ತದೆ. ಈ ಅಮಾನುಷತೆಗೆ ತೆರೆ ಎಳೆಯಲು ಅವರು ಪುಢಾರಿಯ ತಮ್ಮನನ್ನೇ ಕೊಲೆಮಾಡಲು ಸಂಚು ಹೂಡುತ್ತಾರೆ. ಊಹಿಸಲಸಾಧ್ಯವಾದ ತಿರುವುಗಳಿವು.

ಪೋಲಿಗೆಳೆಯರ ಸಣ್ಣಪುಟ್ಟ ಕಳ್ಳತನಗಳು, ಯಾರಿಗಾಗಿಯೋ ಮಾಡುವ ಬರ್ಬರ ಕೊಲೆಗಳ ಮಧ್ಯೆ ಬೆಳದಿಂಗಳಂಥ ಪ್ರೇಮ ಕಥೆಯೊಂದು ನಡೆಯುತ್ತದೆ. ಪುಢಾರಿಯ ಮಗಳು ನೈದಿಲೆಯಂಥ ಚೆಂದದ ಬೆಡಗಿ ತುಳಸಿ ಜೈ ಅನ್ನು ಪ್ರೀತಿಸುವ ಪರಿ, ಮತ್ತು ಅದರ ವಿಲಕ್ಷಣ ಅಂತ್ಯ ಚಿತ್ರದ ಮುಖ್ಯ ಘಟ್ಟಗಳಾಗಿ ಕಾಡುತ್ತವೆ. ತುಳಸಿಯಾಗಿ ಸ್ವಾತಿಯದು ಅದ್ಭುತ ನಟನೆ.

ತುಳಸಿಯ ಮುಗ್ಧ ಪ್ರೀತಿ, ಆಕರ್ಷಣೆ ಆಕೆಯ ಬೊಗಸೆ ಕಂಗಳು, ಕಳೆದು ಹೋದ ಬಾಲ್ಯದ ಗೆಳತಿಯಂತೆ, ಲಂಗ ದಾವಣಿಯಲ್ಲಿ ಅಪ್ಪಟ ಮಣ್ಣಿನ ನೆಲದ ಹುಡುಗಿಯಾಗಿ ಗಮನ ಸೆಳೆಯುತ್ತಾಳೆ. ಸಿನಿಮಾದಲ್ಲಿ ಪ್ರೀತಿ ಕುರಿತಂತೆ ಎಲ್ಲೂ ಪುಟಗಟ್ಟಲೆ ಗಂಟೆಗಟ್ಟಲೆ ಭಾಷಣಗಳಿಲ್ಲ. ಮನೆಯವರ ಎಮೋಶನಲ್ ಬ್ಲಾಕ್‌ಮೇಲ್ ಗೆ ಸ್ವಾತಿಯ ಸಂಯಮ ನಟನೆ ಬೆರಗುಗೊಳಿಸುತ್ತದೆ. ಪರಮ್ ಪಾತ್ರದಲ್ಲಿ ಶಶಿಕುಮಾರ್ ,ಕಾಶಿ ಪಾತ್ರದಲ್ಲಿ ಗಾಂಜಾಕುರುಪ್ಪು ಇಷ್ಟವಾಗುತ್ತಾರೆ.

ಜೇಮ್ಸ್ ವಸಂತನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಎಸ್.ಆರ್.ಕಥಿರ್ ರ ಸಿನಿಮಾಟೋಗ್ರಫಿ ಆಹ್ಲಾದಕರ. ಚಿತ್ರದ ಪ್ರತಿ ಫ್ರೇಮ್ 1960 ರ ಪರಿಸರಗಳನ್ನು ಗಾಢವಾಗಿ ನೆನಪಿಸುತ್ತದೆ. ಆ ಸಮಯದ ಉದ್ದ ಹಿಪ್ಪಿ ಮಾದರಿಯ ಕೇಶ ವಿನ್ಯಾಸ, ದಟ್ಟ ಬಣ್ಣಗಳ ಬೆಲ್ ಬಾಟಂ ಪ್ಯಾಂಟುಗಳು, ಬಿಗಿಯಾದ ದೊಡ್ಡ ಕಾಲರಿನ ಹೂಗಳ, ಚೆಕ್ಸ್ ಶರಟುಗಳು, ಆಗಾಗ ಹಾದು ಹೋಗುವ ಅಂಬಾಸಿಡರ್ ಕಾರುಗಳು, ಹಳೆಯ ಮನೆಗಳು, ಬಸ್ಸುಗಳು, ಕರೆನ್ಸಿ ನೋಟುಗಳು, ನೇಪಥ್ಯದ ರೇಡಿಯೋ ಹಾಡುಗಳು ನಮ್ಮನ್ನು ಮೂವತ್ತು ವರ್ಷಗಳ ಹಿಂದಕ್ಕೆ ಕರೆದೊಯ್ಯುವುದು ಖಚಿತ.

ಕೊನೆಯಲ್ಲಿ ನಾಯಕನನ್ನು ಅವನ ಜೀವದ ಗೆಳೆಯ ನಂಬಿಕೆ ದ್ರೋಹದಿಂದ ಕೊಲೆ ಮಾಡಿಸಿದ ಮೇಲೆ ಅವನು ಬೂತಿನಿಂದ ಹಾಲು, ತರಕಾರಿ ತರುವಷ್ಟೇ ಸಹಜವಾಗಿ ನಿರ್ಲಿಪ್ತವಾಗಿ ಕೆರೆಯ ದಡದ ಮೇಲೆ ನಡೆದು ಬರುವ ಸಿಂಗಲ್ ಶಾಟ್ ದೃಶ್ಯವಂತೂ ಇಡೀ ಚಿತ್ರಕ್ಕೆ ಮುಕುಟ ಪ್ರಾಯ. ಚಿತ್ರದ ಸೂತ್ರಧಾರ ಶಶಿಕುಮಾರ್‌ನ ಪ್ರತಿಭೆಯ ಬಗ್ಗೆ ಹೆಮ್ಮೆಯಾಗುತ್ತದೆ. ಚಿತ್ರದಲ್ಲಿ ಕೆಲ ಬರ್ಬರ ಕೊಲೆಗಳು ಜಿಗುಪ್ಸೆ ಮೂಡಿಸಿದರೂ ಒಟ್ಟಾರೆ ಚಿತ್ರ ಹೊಸ ಅನುಭವ ನೀಡುತ್ತದೆ.

ಚಿತ್ರ : ಸುಬ್ರಹ್ಮಣ್ಯ ಪುರಂ, ನಿರ್ದೇಶನ, ನಿರ್ಮಾಣ ಮತ್ತು ಸ್ಕ್ರೀನ್ ಪ್ಲೇ :ಶಶಿಕುಮಾರ್, ತಾರಾಗಣ:ಜೈ,ಶಶಿಕುಮಾರ್,ಸ್ವಾತಿ, ಗಾಂಜಾ ಕುರುಪ್ಪು, ಸಮುದ್ರ ಕನಿ. ಸಂಗೀತ:ಜೇಮ್ಸ್ ವಸಂತನ್. ಛಾಯಾಗ್ರಹಣ :ಎಸ್.ಆರ್.ಕಥಿರ್, ಬಿಡುಗಡೆ:2008, ಸಮಯ: 160 ನಿಮಿಷ, ಭಾಷೆ:ತಮಿಳು

Share 

Comment

You need to be a member of saangatya to add comments!

Join this Ning Network

© 2009   Created by ಸಾಂಗತ್ಯ on Ning.   Create a Ning Network!

Badges  |  Report an Issue  |  Privacy  |  Terms of Service